top of page

ವಿಶ್ವ ರಂಗಭೂಮಿ ದಿನಾಚರಣೆ - 2023

Writer's picture: Ind ReportsInd Reports

Updated: Apr 26, 2023

ಪ್ರತಿ ವರ್ಷವೂ ಮಾರ್ಚ್ 27ರ ದಿನವನ್ನು 'ವಿಶ್ವ ರಂಗಭೂಮಿ ದಿನ' ಎಂದು ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆ (International Theatre Institute) 1962ರಿಂದ ವಿಶ್ವ ರಂಗಭೂಮಿ ದಿನದ ಆಚರಣೆಯನ್ನು ಆರಂಭಿಸಿತು. ವಿಶ್ವ ಸಂಸ್ಥೆಯ ಯುನೆಸ್ಕೋ (United Nations Educational, Scientific, and Cultural Organization #UNESCO) ಇದರ ಆಚರಣೆಗೆ ಬೆಂಬಲ ನೀಡುತ್ತಾ ಬಂದಿದೆ.



ಸಾಹಿತ್ಯ, ಸಂಗೀತ, ನೃತ್ಯ, ಕಲೆ, ವಿನ್ಯಾಸ, ಅಭಿನಯ - ಈ ಎಲ್ಲದರ ಸಂಗಮವೇ ನಾಟಕ. ಆದ್ದರಿಂದಲೇ ಇದೊಂದು ವಿಶಿಷ್ಟವಾದ ಪ್ರದರ್ಶನ ಕಲೆ. ರಂಗಭೂಮಿಯ ಈ ವೈಶಿಷ್ಟ್ಯವನ್ನು ಗುರುತಿಸಿ ಸತ್ಕರಿಸುವದಕ್ಕೆ ಮೀಸಲಿರುವ ದಿನ ವಿಶ್ವ ರಂಗಭೂಮಿ ದಿನಾಚರಣೆ



ಭಾರತೀಯ ರಂಗಭೂಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳಲ್ಲಿ ಹಲವು ಪುರಾತನ ನಾಟಕಗಳು ರಚನೆಗೊಂಡಿದ್ದವು.

ಪ್ರದರ್ಶನ ಕಲೆಗಳ ಕುರಿತಾದ ನಾಟ್ಯಶಾಸ್ತ್ರ ಕೃತಿಯ ರಚನೆಯು ಭಾರತೀಯ ಕಲಾ ಚರಿತ್ರೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲ್ಪಡುತ್ತದೆ.ಭರತಮುನಿಯ ನಾಟ್ಯಶಾಸ್ತ್ರ ರಚನೆಯಾದದ್ದು ಕ್ರಿಸ್ತಪೂರ್ವ 200 ರಿಂದ 500 ರ ನಡುವೆ ಎಂದು ಹೇಳಲಾಗುತ್ತದೆ. ನಂತರ ಭಾಸ, ಕಾಳಿದಾಸ, ಭವಭೂತಿ, ಅಷ್ವಘೋಷ, ಮುಂತಾದ ಹಲವು ಮಹಾನ್ ನಾಟಕಕಾರರು ಭಾರತದ ಪ್ರಾಚೀನ ರಂಗಭೂಮಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು.



ಇಂದಿಗೂ ಹಲವು ರಂಗಕರ್ಮಿಗಳು ಹಾಗೂ ನೃತ್ಯ ಕಲಾವಿದರು ನಟರಾಜನಾದ ಶಿವನನ್ನು ಈ ಶ್ಲೋಕದೊಂದಿಗೆ ಸ್ತುತಿಸುತ್ತಾರೆ.

ಆಂಗಿಕಂ ಭುವನಮ್ ಯಸ್ಯ

ವಾಚಿಕಂ ಸರ್ವ ವಾಂಗ್ಮಯಂ

ಆಹಾರ್ಯಂ ಚಂದ್ರ ತಾರಾದಿ

ತಂ ನಮಃ ಸಾತ್ವಿಕಮ್ ಶಿವಂ

ಇದರಲ್ಲಿ ಆಂಗಿಕ, ವಾಚಿಕ, ಆಹಾರ್ಯ ಅನ್ನುವ ಪದಗಳು ಆಂಗಿಕ ಅಭಿನಯ (ಅಂಗಾಂಗಗಳಿಂದ), ವಾಚಿಕ ಅಭಿನಯ (ಮಾತಿನ ಮೂಲಕ), ಆಹಾರ್ಯ (ಆಭರಣ, ಅಲಂಕಾರಗಳು) ವನ್ನು ಸೂಚಿಸುತ್ತವೆ.



ಕನ್ನಡ ನಾಡಿನ ರಾಜ - ಮಹಾರಾಜರು ನಾಟಕ ಕಲೆಯನ್ನ ಪೋಷಿಸಿದ ಇತಿಹಾಸ ಇದೆ. ವಿಜಯನಗರದ ಅರಸರು, ಮೈಸೂರ ಒಡೆಯರು, ಕೆಳದಿ ನಾಯಕರು ಮುಂತಾದ ಹಲವು ರಾಜರುಗಳ ಆಸ್ಥಾನಗಳಲ್ಲಿ ನಾಟಕ ಪ್ರದರ್ಶನ ನಡೆಯುತ್ತಿದ್ದವು. ಅಲ್ಲದೆ, ನಾಟಕ ಶಾಲೆಗಳನ್ನು ನಡೆಸುತ್ತಿದ್ದರು ಎಂಬುದಕ್ಕೆ ಇತಿಹಾಸದ ದಾಖಲೆಗಳಿವೆ.



ಕನ್ನಡದ ರಂಗಭೂಮಿ ವಲಯದಲ್ಲಿ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಲ್ಲದೆ ಜನಪದ ರಂಗಭೂಮಿಗೆ ವಿಶೇಷ ಸ್ಥಾನವಿದೆ.

ಅನೇಕ ಜನಪದ ಕಲಾ ಪ್ರಕಾರಗಳಲ್ಲಿ ನಟನೆಯ ಬಳಕೆ ಕಂಡು ಬರುತ್ತದೆ.

ಸಂಸ್ಕೃತ ರಂಗಭೂಮಿ ಹಾಗೂ ರಾಜಾಶ್ರಯದಲ್ಲಿ ನಡೆಯುತ್ತಿದ್ದ ನಾಟಕ ಒಂದೆಡೆ ಆದರೆ, ಇನ್ನೊಂದೆಡೆ ಜನಪದ ರಂಗಭೂಮಿ, ಜನಪದ ಕಲೆಗಳ ರೂಪದಲ್ಲಿ ನಡೆದುಕೊಂಡು ಬಂತು. ಇವೆರಡರ ಹೊರತಾಗಿ (ಮಧ್ಯದಲ್ಲಿ) ಇನ್ನೊಂದು ರೀತಿಯ ರಂಗಭೂಮಿಯ ಉಗಮವಾದದ್ದು ಕಳೆದ ಒಂದೂವರೆ ಶತಮಾನದಲ್ಲಿ. ಇದೇ ಇಂದಿನ ವೃತ್ತಿ ರಂಗಭೂಮಿಯಾಗಿ ಬೆಳೆದಿದೆ. ಪಾಶ್ಚಾತ್ಯ ರಂಗಭೂಮಿಯ ಸಂಪರ್ಕದಿಂದ ಭಾರತೀಯ ಸೊಬಗಿನ ಜೊತೆಗೆ ಹೊರಹೊಮ್ಮಿದ ಪ್ರಕಾರವೇ ಇದಾಗಿದೆ.


ನಾಟಕ ಕಂಪನಿಗಳ ಮೂಲಕ ಪ್ರಮುಖವಾಗಿ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳ ಪ್ರದರ್ಶನ ನಡೆಯುತ್ತಿದ್ದವು. ಸುಬ್ಬಯ್ಯನಾಯ್ಡು , ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ, ಏಣಗಿ ಬಾಳಪ್ಪ ಹಾಗೂ ನಂತರದ K V ಸುಬ್ಬಣ್ಣ, B V ಕಾರಂತರು... ಇವರೆಲ್ಲರೂ ಕನ್ನಡ ವೃತ್ತಿ ರಂಗಭೂಮಿಯ ಪ್ರಮುಖರು.



ರಂಗಭೂಮಿ ಕನ್ನಡಿರಿಗೆ ನೀಡಿದ ಮತ್ತೊಂದು ವಿಶಿಷ್ಟ ಕೊಡುಗೆ ಎಂದರೆ ಸಿನಿಮಾ ಪ್ರತಿಭೆಗಳು. ಅನೇಕ ದಿಗ್ಗಜ ನಟ-ನಟಿಯರು, ಸಂಗೀತಗಾರರು, ಕಲಾವಿದರು, ವಸ್ತ್ರ ವಿನ್ಯಾಸಕರು, ಪ್ರಸಾಧನ ತಜ್ಞರು ರಂಗಭೂಮಿಯಿಂದಲೇ ಸಿನಿಮಾ ಕ್ಷೇತ್ರಕ್ಕೆ ಬಂದವರು. ರಂಗಭೂಮಿಯಲ್ಲಿ ತರಬೇತಿ ಪಡೆದು, ರಂಗದಲ್ಲಿ ಪಳಗಿದ ನಟ-ನಟಿಯರು ಸಿನಿಮಾ ಕ್ಷೇತ್ರದ ಉತ್ತುಂಗಕ್ಕೆ ಏರಿದರು. ಅಷ್ಟೇ ಅಲ್ಲದೆ, ಅನೇಕ ಕಲಾವಿದರಿಗೆ ಮಾದರಿ ಆದರು. ಈ ನಿಟ್ಟಿನಲ್ಲಿ ರಂಗಭೂಮಿ ಸಿನಿಮಾ ಕ್ಷೇತ್ರದ ತಾಯಿ ಎಂದರೆ ತಪ್ಪಾಗಲಾರದು.




ನಾಟಕಕ್ಕೆ ಬಣ್ಣ ನೀಡುವುದು ಬಗೆ ಬಗೆಯ ವಸ್ತ್ರಗಳು (costume), ಪ್ರಸಾಧನ (makeup ), ವರ್ಣರಂಜಿತ ಪರದೆಗಳು (backdrop), ರಂಗದ ಮೇಲೆ ಬಳಸುವ ಅನೇಕ ವಸ್ತುಗಳು (properties). ಇವೆಲ್ಲವೂ ವೀಕ್ಷಕರಿಗೆ ಆಕರ್ಷಕವಾದ ಅಂಶಗಳು.

ಆದರೆ ಇವೆಲ್ಲದರ ಸಹಾಯ ಇಲ್ಲದೆ ನಾಟಕ ಮಾಡಬೇಕು ಎಂದರೆ ಅದು ಎಷ್ಟು ಕಷ್ಟದ ಕೆಲಸ.

ನಾಟಕದ ಪ್ರತಿಯೊಂದು ಭಾವವನ್ನೂ ಧ್ವನಿಯ ಮೂಲಕ ಶ್ರೋತೃಗಳಿಗೆ ತಲುಪಿಸುವ ಕೆಲಸ ಒಂದು ದೊಡ್ಡ ಸಾಹಸವೇ ಸರಿ.



ನೋಡಬೇಕಾದ ನಾಟಕವನ್ನು ಕೆಳ್ಮೆಯ ಮೂಲಕ ಕೇಳುಗರಿಗೆ ತೋರಿಸುವುದು ರೇಡಿಯೋ ನಾಟಕ ಕಲೆಗೆ ವೈಶಿಷ್ಟ ಸ್ಥಾನವಿದೆ. ಈ ಸಂದರ್ಭದಲ್ಲಿ ಆಕಾಶವಾಣಿಯ (#AllIndiaRadio) ನಾಟಕ ಕಲಾವಿದರ ಕೊಡುಗೆಯನ್ನು ನಾವು ಮರೆಯುವ ಹಾಗಿಲ್ಲ.



ರಂಗಭೂಮಿ ಹಾಗೂ ಸಮಾಜ ಸುಧಾರಣೆಗೆ ಅವಿನಾಭಾವ ಸಂಬಂಧ ಇದೆ. ನಾಟಕಕಾರರು ರಚಿಸಿದ್ದ ವಿಸ್ತಾರವಾದ ನಾಟಕಗಳ ಪ್ರದರ್ಶನದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಒಂದು ಬಗೆಯದು. ಇನ್ನೊಂದೆಡೆ ಕಿರುನಾಟಕ ಹಾಗೂ ಬೀದಿ ನಾಟಕಗಳಂಥ ಪ್ರಕಾರಗಳಿಂದ ಅನೇಕ ಸಾಮಾಜಿಕ ಸಂದೇಶಗಳನ್ನು ಹಳ್ಳಿ ಹಳ್ಳಿಗೆ ತಲುಪಿಸುವಂಥ ಕೆಲಸ ರಂಗಭೂಮಿ ಮಾಡಿದೆ. ರಾಜಕೀಯ ಹಾಗೂ ಸಮಾಜ ಸುಧಾರಣೆ ಮಾತ್ರವಲ್ಲದೆ ಆರೋಗ್ಯ, ಸ್ವಚ್ಛತೆ, ಶಿಕ್ಷಣ, ಮತದಾನದ ಮಹತ್ವ, ಹೀಗೆ ವಿಷಯಗಳನ್ನ ಇದು ಒಳಗೊಂಡಿದೆ.



ಎಲ್ಲಾ ರಂಗಕರ್ಮಿಗಳು, ನಾಟಕಕಾರರು, ಪ್ರಸಾಧನ ಕಲಾವಿದರು, ತಾಂತ್ರಿಕ ತಜ್ಞರು ಹಾಗೂ ನಾಟಕಪ್ರಿಯರಿಗೆ ವಿಶ್ವ ರಂಗಭೂಮಿ ದಿನಾಚರಣೆ ಹಾರ್ದಿಕ ಶುಭಾಶಯಗಳು. ನಾಟಕ ಕಲೆ ಸಮೃದ್ಧವಾಗಿ ಬೆಳೆದು ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಿ ಪರಿವರ್ತನೆಗೆ ಅನುಕೂಲವಾಗುವುದರ ಜೊತೆಗೆ ಎಲ್ಲರ ಮನಗಳಿಗೆ ಮುದ ನೀಡುವ ಕಾರ್ಯವನ್ನು ಮುಂದುವರೆಸಲಿ.

7 views0 comments

Comentários


bottom of page